ಅಡಿಗಾಲುವೆ

ರಸ್ತೆ ಸಣ್ಣ ಹಳ್ಳವನ್ನು ಇಲ್ಲವೆ ಕೊರಕಲನ್ನು ದಾಟುವಾಗ ಅಡಿಯಲ್ಲಿ ಕಟ್ಟುವ ಕಲ್ಲುಗಾರೆಯ ಚಿಕ್ಕ ಕಟ್ಟಡ (ಕಲ್ವರ್ಟ್). ಇದು ಮೇಲುಗಡೆಯಿಂದ ಬರುವ ಮಳೆ ನೀರನ್ನು ರಸ್ತೆಗೆ ಅಪಾಯವಾಗದಂತೆ ಕೆಳಗಡೆಗೆ ಸಾಗಿಸುತ್ತದೆ. ಸಾಮಾನ್ಯವಾಗಿ ಅಡಿಗಾಲುವೆಯಲ್ಲಿ ಒಂದು ಕಣ್ಣಿರುವುದೇ ಹೆಚ್ಚು. ಎರಡು ಕೊನೆಗಳಲ್ಲಿಯೂ ಇರುವ ಕಂಬಗಳನ್ನು ಕಲ್ಲಿನ ಅಡಿಪಾಯದ ಮೇಲೆ ಕಾಂಕ್ರೀಟು ಹಾಕಿ ಅದರ ಮೇಲೆ ಕಲ್ಲುಗಾರೆಯಿಂದ ಕಟ್ಟುತ್ತಾರೆ. ಕಣ್ಣಿನ ಅಗಲ 0.61-1.82 ಮೀ ಇರುತ್ತದೆ. ಈ ಕಣ್ಣುಗಳಿಗೆ ಅಡ್ಡಲಾಗಿ ಮೇಲಿನ ರಸ್ತೆ ಹೊರಬೇಕಾದ ತೂಕಕ್ಕೆ ಅನುಸಾರವಾಗಿ 152.4-203 ಮಿ.ಮೀ. ದಪ್ಪದ ಹಸಿ ಕಲ್ಲು ಚಪ್ಪಡಿಗಳನ್ನು ಎಳೆಯುವುದೇ ರೂಢಿ, ಕಣ್ಣಿನ ಅಗಲ ಹೆಚ್ಚಾದರೆ ಇಟ್ಟಿಗೆ ಗಾರೆಯ ಇಲ್ಲವೆ ಕಲ್ಲುಗಾರೆಯ ಕಮಾನುಗಳನ್ನು ಕಟ್ಟುತ್ತಾರೆ. ಈಚೆಗೆ ಅಡಿಗಾಲುವೆಗಳ ಚಪ್ಪಡಿಗಳನ್ನು ಎಲ್ಲೆಲ್ಲಿಯೂ ಪ್ರಬಲಿತಕಾಂಕ್ರೀಟಿನಿಂದ (ರಿಇನ್‍ಫೋರ್‍ಸ್ಡ್) ತಯಾರಿಸುತ್ತಿದ್ದಾರೆ. ಕಣ್ಣುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಂಬಗಳ ಕೊನೆಗಳಿಂದ ಏರಿಯ ಕಡೆಗೆ ರೆಕ್ಕೆಗೋಡೆಗಳನ್ನು (ವಿಂಗ್‍ವಾಲ್ಸ್) ಹಳ್ಳದ ಮಹಾಪ್ರವಾಹದ ಮಟ್ಟದವರೆಗೂ ಕಟ್ಟಿ ಏರಿಯ ಮಣ್ಣು ಕೊರೆಯದ ಹಾಗೆ ನೋಡಿಕೊಳ್ಳುತ್ತಾರೆ. ಇಂಥ ಕಡೆಗಳಲ್ಲಿ ರಸ್ತೆ ಅಡಿಗಾಲುವೆಯ ಎರಡು ಕಡೆಗಳಲ್ಲಿಯೂ ಸ್ವಲ್ಪ ದೂರ ಬಹಳ ಎತ್ತರವಿಲ್ಲದ ಏರಿಯ ಮೇಲೆ ಹೋಗುತ್ತದೆ.
                                                                   
(ಎಚ್.ಸಿ.ಕೆ.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ